ಭರತಪುರ
	ಭಾರತದ ರಾಜಸ್ಥಾನ ರಾಜ್ಯದ ಒಂದು ಜಿಲ್ಲೆ. ಜಿಲ್ಲಾ ಆಡಳಿತ ಕೇಂದ್ರ ಮತ್ತು ಜಿಲ್ಲೆಯ ಪ್ರಮುಖ ಪಟ್ಟಣ. ಈ ಜಿಲ್ಲೆಯ ಉ.ಅ. 260 20 - 270 47 ನಿಂದ ಪೂ. ರೇ. 760 53 - 780 15 ನಲ್ಲಿದೆ.  ಉತ್ತರಕ್ಕೆ ಹರಿಯಾಣ ರಾಜ್ಯದ ಗುರ್‍ಗಾಂವ್. ಪೂರ್ವದಲ್ಲಿ  ಉತ್ತರ ಪ್ರದೇಶದ ಮಥುರಾ, ಆಗ್ರಾ, ದಕ್ಷಿಣಕ್ಕೆ ಮಧ್ಯ ಪ್ರದೇಶದ ಮೋರೇನ, ಪಶ್ಚಿಮದಲ್ಲಿ  ಸವಾಯ್ ಮಾಧೋಪುರ್ ಮತ್ತು ಆಲ್ವರ್ ಜಿಲ್ಲೆಗಳಿವೆ. ನಗರ್, ಕಾಮನ್, ದೀಗ್, ನದ್‍ಬಾಯ್, ಭರತ್‍ಪುರ, ವೇರ್, ಬಯಾನ, ರುಪ್‍ಬಸ್, ಬಸೆರಿ, ಬಾರಿ, ಧೋಲ್‍ಪುರ್ ಮತ್ತು ರಾಜ್‍ಖೇರ ಇದರ 12 ತಾಲ್ಲೂಕುಗಳು. ಜಿಲ್ಲಾ ವಿಸ್ತೀರ್ಣ ಸುಮಾರು 8098 ಚಕಿಮೀ ಜನಸಂಖ್ಯೆ 1,884,132 (1981).
 ಜಿಲ್ಲಾ ಭೂಪ್ರದೇಶ ಸಮತಟ್ಟಾಗಿದ್ದು ಉತ್ತರ ಭಾಗದಲ್ಲಿ ಮಾತ್ರ ಅಲ್ಲಲ್ಲಿ ಸುಮಾರು 60-61 ಮೀಟರ್ ಎತ್ತರದ ಬೆಟ್ಟಗುಡ್ಡಗಳಿವೆ. ಇವುಗಳಲ್ಲಿ ಕಬ್ಬಿಣದ ಅದುರಿನಿಂದ ಕೂಡಿರುವ ಶಿಲೆಗಳಿವೆ. ಇವು ಕಟ್ಟಡಕ್ಕೆ ಉಪಯುಕ್ತ. ಬನಗಂಗಾ ಈ ಜಿಲ್ಲೆಯ ಪ್ರಮುಖ ನದಿ. ಇದರ ನೆಲೆ ಮಣ್ಣಿನ ಪ್ರದೇಶದಲ್ಲಿ ಬಾರ್ಲಿ, ದ್ವಿದಳ ಧಾನ್ಯಗಳನ್ನು ಮತ್ತು ಇಡೀ ಜಿಲ್ಲೆಯಲ್ಲಿ ಸಾಸಿವೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಸುತ್ತಾರೆ. ಇದರೊಂದಿಗೆ ಇತರ ಎಣ್ಣೆ  ಬೀಜಗಳು ಹೆಚ್ಚು ಬೆಳೆಯುವುದರಿಂದ ಜಿಲ್ಲೆಯಲ್ಲಿ ಎಣ್ಣೆ ಗಿರಣಿಗಳು ಅಧಿಕ ಸಂಖ್ಯೆಯಲ್ಲಿವೆ.

ಈ ಜಿಲ್ಲೆಯಲ್ಲಿ ದಂತದ ಹಾಗೂ ಬೆಳ್ಳಿಯ ಹಿಡಿಗಳಿರುವ ಸುಂದರವಾದ ಚಾಮರಗಳನ್ನು ತಯಾರಿಸುತ್ತಾರೆ. ಇಲ್ಲಿಯ ಅರಣ್ಯಗಳಲ್ಲಿ ಲಾಮಂಚದ ಗಿಡಗಳು ಬೆಳೆಯುತ್ತವೆ. ಲಾಮಂಚದ ಬೇರನ್ನು ಹೆಚ್ಚಾಗಿ ಕನೌಜದ ಅತ್ತರ್ (ಸುಗಂಧ ದ್ರವ್ಯ) ತಯಾರಕರು ಬಳಸಿಕೊಳುತ್ತಾರೆ.

	ಭರತಪುರ ಪಟ್ಟ್ಟಣ ಪಶ್ಚಿಮ ರೈಲ್ವೇ ಹಾದಿಯಲ್ಲಿದೆ. ಇದು ಆಗ್ರಾದ ವಾಯವ್ಯಕ್ಕೆ ಸುಮಾರು 55 ಕಿಮೀ ದೂರದಲ್ಲಿದೆ. ಜನಸಂಖ್ಯೆ 105,274 (1981). ಆಧುನಿಕ ನಗರ ಸೌಕರ್ಯಗಳೆಲ್ಲ ಇರುವ ಈ ಪಟ್ಟಣ ಶ್ರೀಗಂಧ, ದಂತ ಮತ್ತು ಬೆಳ್ಳಿಯ ಕುಶಲಕಲೆಗೆ ಪ್ರಸಿದ್ಧ. ಭರತಪುರಕ್ಕೆ ವಾಯವ್ಯದಲ್ಲಿ 33 ಕಿಮೀ ದೂರದಲ್ಲಿರುವ ದಿಗ್ ಪಟ್ಟಣದಲ್ಲಿ ಈಗಲೂ ಸೂರಜ್‍ಮಲ್‍ನ ಸುಂದರವಾದ ಅರಮನೆ ಇದೆ. ನಗರದಲ್ಲಿ ಪ್ರಾಚೀನ ಮಣ್ಣಿನ ಗೋಡೆಗಳ ಭಗ್ನಾವಶೇಷಗಳಿವೆ.
ಭರತಪುರ ರಾಜ್ಯದ ರಾಜಧಾನಿಯಾಗಿದ್ದ ಈ ಪಟ್ಟಣ 18ನೆಯ ಶತಮಾನದ ಪೂರ್ವಾರ್ಧದಲ್ಲಿ ಜಾಟ ದೊರೆ ಬದನ್‍ಸಿಂಗ್‍ನಿಂದ ಸ್ಥಾಪಿತವಾಯಿತು. ಆತನ ದತ್ತು ಪುತ್ರನೂ ಉತ್ತರಾಧಿಕಾರಿಯೂ ಆದ ಸೂರಜ್‍ಮಲ್‍ನ ಆಡಳಿತಾವಧಿಯಲ್ಲಿ ಈ ರಾಜ್ಯ ಆಗ್ರಾ, ಧೋಲಪುರ್, ಮಣಿಪುರಿ, ಅಲಿಘರ್ ಮುಂತಾದ ಜಿಲ್ಲೆಗಳವರೆಗೆ ವಿಸ್ತಾರಗೊಂಡಿತು. ಲಾರ್ಡ್‍ಲೇಕ್‍ನ ನೇತೃತ್ವದಲ್ಲಿ 1805ರಲ್ಲಿ ನಡೆದ ದ್ವಿತೀಯ ಆಂಗ್ಲೋ ಮರಾಠ ಯುದ್ಧದ ವೇಳೆ ಬ್ರಿಟಿಷರು ಇದರ ರಾಜಧಾನಿಯ ಕೋಟೆಯನ್ನು ಭೇದಿಸುವಲ್ಲಿ ವಿಫಲರಾಗಿ ಹಿಮ್ಮೆಟ್ಟಿದರು. 1805 ಏಪ್ರಿಲ್ 17ರಂದು ಒಪ್ಪಂದವಾಗಿ ರಾಜನ ಹಕ್ಕನ್ನು ಒಪ್ಪಿಕೊಳ್ಳಲಾಯಿತು. ಮುಂದೆ ಉತ್ತರಾಧಿಕಾರಕ್ಕಾಗಿ ನಡೆದ ಒಳಜಗಳದಲ್ಲಿ ಬ್ರಿಟಿಷರು 1826 ಜನವರಿ 18ರಂದು ತಮ್ಮ ಆಡಳಿತಕ್ಕೆ ಸೇರಿಸಿಕೊಂಡರು. ಅಂದಿನಿಂದ ಭರತಪುರ ಸಂಸ್ಥಾನ 1947ರ ತನಕ ಬ್ರಿಟಿಷರ ಪೂರ್ವ ರಜಪುಟಾನ ಉಪವಿಭಾಗಕ್ಕೆ ಸೇರಿತ್ತು.
ಭರತಪುರದ ರೈಲ್ವೆ ನಿಲ್ದಾಣದಿಂದ 3ಕಿಮೀ ಅಂತರದಲ್ಲಿ ಪ್ರಸಿದ್ಧ ಪಕ್ಷಿಧಾಮವಿದೆ. ಮೊದಲು ಮಹಾರಾಜರ ಬೇಟೆಯ ಸ್ಥಳವಾಗಿದ್ದ ಇದು ಇಂದು ಪಕ್ಷಿಪ್ರೇಮಿಗಳ ನಂದನವನವಾಗಿದೆ. ಪಕ್ಷಿಗಳೇ ಅಲ್ಲದೆ ಜಿಂಕೆ, ಸಾರಂಗ ಮೊದಲಾದ ಪ್ರಾಣಿಗಳೂ ಇಲ್ಲಿವೆ. ಭರತಪುರದ ಮಹಾರಾಜ ಕಟ್ಟಿಸಿರುವ ಸುಸಜ್ಜಿತವಾದ 'ಶಾಂತಿ ಕುಟೀರ ವೆಂಬ ವಿಶ್ರಾಂತಿ ಗೃಹವಿದೆ. ಭರತಪುರದಲ್ಲಿರುವ ಪುರಾನಾಕೋಠಿ ಬರೋಕ್ ಮುಘಲ್ ಶೈಲಿಗೆ ಉತ್ತಮ ನಿದರ್ಶನ. ಕಾಮ ಎಂಬುದು ಭರತಪುರದ ಬಳಿ ಇರುವ ಪ್ರಸಿದ್ಧ ಯಾತ್ರಾಸ್ಥಳ. ಪುರಾಣ ಪ್ರಸಿದ್ಧ ಭರತನಿಂದ ಈ ಪಟ್ಟಣದ ಭರತಪುರವೆಂದು ಹೆಸರು ಬಂದಿದೆ ಎಂದು ಹೇಳುವುದುಂಟು. 
(ಕೆ.ಆರ್.ಏ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ